<font face="mangal" size="3">ಕ್ಲೇಮು ಮಾಡದ ಠೇವಣಿಗಳ ಬಗ್ಗೆ ಸೂಚನೆ</font> - ಆರ್ಬಿಐ - Reserve Bank of India
ಕ್ಲೇಮು ಮಾಡದ ಠೇವಣಿಗಳ ಬಗ್ಗೆ ಸೂಚನೆ
22 ಜುಲೈ 2022 ಕ್ಲೇಮು ಮಾಡದ ಠೇವಣಿಗಳ ಬಗ್ಗೆ ಸೂಚನೆ ವಾಯಿದೆ ತೀರಿದ ನಂತರ 10 ವರ್ಷಗಳ ನಂತರವೂ ಯಾವುದೇ ಉಳಿತಾಯ ಠೇವಣಿ/ಚಾಲ್ತಿ ಖಾತೆ ಅಥವಾ ಸಾವಧಿ ಠೇವಣಿ ಖಾತೆಯನ್ನುನಿರ್ವಹಿಸದದೇ ಇದ್ದರೆ ಅಂತಹ ಠೇವಣಿಗಳನ್ನು “ಕ್ಲೇಮು ಮಾಡದ ಠೇವಣಿಗಳು” ಎಂದು ವರ್ಗೀಕರಿಸಲಾಗುವುದು. ಅಂತಹ ಠೇವಣಿಗಳನ್ನು ಬ್ಯಾಂಕುಗಳು, ಭಾರತೀಯ ರಿಸರ್ವ್ ಬ್ಯಾಂಕ್ ನಿರ್ವಹಣೆ ಮಾಡುತ್ತಿರುವ “ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ “ (ಡಿ ಇ ಎ) ನಿಧಿಗೆ ವರ್ಗಾಯಿಸುತ್ತವೆ. ಆದಾಗ್ಯೂ, ಠೇವಣಿದಾರರು ಠೇವಣಿ ಮಾಡಿರುವ ಬ್ಯಾಂಕುಗಳಿಂದ ಮುಂದಿನ ದಿನಗಳಲ್ಲಿ ಆಗಿನ ಪ್ರಸ್ತುತ ದರದ ಬಡ್ಡಿ ಸಮೇತ ಠೇವಣಿ ಪಡೆಯಲು ಕ್ಲೇಮು ಸಲ್ಲಿಸಬಹುದು. ಕಾಲ ಕಾಲಕ್ಕೆ ಬ್ಯಾಂಕುಗಳು ಮತ್ತು ಆರ್ ಬಿ ಐ ಈ ಬಗ್ಗೆ ಜನ ಜಾಗೃತಿ ಕಾರ್ಯ ಕ್ರಮದ ಮೂಲಕ ಪ್ರಚಾರ ಮಾಡಿದ್ದರೂ ಸಹಾ ಕ್ಲೇಮು ಮಾಡದ ಠೇವಣಿಗಳಲ್ಲಿ ಹೆಚ್ಚಳ ಕಂಡುಬರುತ್ತಲೇ ಇದೆ. ತಮ್ಮ ಉಳಿತಾಯ/ಚಾಲ್ತಿ ಖಾತೆಗಳನ್ನು ಮುಂದುವರಿಸುವುದಕ್ಕೆ ಇಚ್ಛಿಸದೇ ಇರುವ ಠೇವಣಿದಾರರು ಅಂತಹ ಖಾತೆಗಳನ್ನು ಮುಕ್ತಾಯ ಗೊಳಿಸದೇ ಇರುವುದು ಮತ್ತು ವಾಯಿದೆ ತೀರಿದ ಠೇವಣಿಗಳನ್ನು ಹಿಂಪಡೆಯಲು ಕ್ಲೇಮು ಸಲ್ಲಿಸದೆ ಇರುವುದು, ಕ್ಲೇಮು ಮಾಡದ ಠೇವಣಿಗಳ ಹೆಚ್ಚಳಕ್ಕೆ ಪ್ರಮುಖ ಕಾರಣಗಳಾಗಿವೆ.ಮೃತ ಪಟ್ಟ ಠೇವಣಿದಾರರ ಕೆಲವು ಪ್ರಕರಣಗಳಲ್ಲಿ ನಾಮ ನಿರ್ದೇಶಿತ ವ್ಯಕ್ತಿ/ಕಾನೂನು ಬದ್ಧ ವಾರಸುದಾರರು ಠೇವಣಿ ಹಿಂಪಡೆಯಲು ಕ್ಲೇಮು ಸಲ್ಲಿಸಲು ಸಂಬಂಧ ಪಟ್ಟ ಬ್ಯಾಂಕುಗಳಿಗೆ ಬರುವುದಿಲ್ಲ. ಅಂತಹ ಠೇವಣಿದಾರನ್ನು ಅಥವಾ ಮೃತ ಠೇವಣಿದಾರರ ನಾಮ ನಿರ್ದೇಶಿತ ವ್ಯಕ್ತಿಗಳನ್ನು/ಕಾನೂನುಬದ್ಧ ವಾರಸುದಾರರನ್ನು ಗುರುತಿಸಿ, ಠೇವಣಿಯನ್ನು ಕ್ಲೇಮು ಮಾಡಲು ಸಹಾಯ ಮಾಡುವ ಸಲುವಾಗಿ, ಬ್ಯಾಂಕುಗಳು ಈಗಾಗಲೇ ತಮ್ಮ ವೆಬ್ ತಾಣದಲ್ಲಿ ಕ್ಲೇಮು ಮಾಡದ ಠೇವಣಿಗಳ ವಿವರಗಳನ್ನು ನೀಡಿದ್ದು, ಅದರೊಂದಿಗೆ ಇಂತಹವರನ್ನು ಗುರುತಿಸುವುದಕ್ಕೆ ಅನುವಾಗುವ ಸ್ವಲ್ಪ ವಿವರಗಳನ್ನೂ ನೀಡಲಾಗಿದೆ. ಸಾರ್ವಜನಿಕರು ಇದನ್ನು ಗಮನಿಸಿ, ಠೇವಣಿಗಳನ್ನು ಕ್ಲೇಮು ಮಾಡಲು ಸಂಬಂಧಪಟ್ಟ ಬ್ಯಾಂಕುಗಳನ್ನು ಸಂಪರ್ಕಿಸಬೇಕಾಗಿ ಕೋರಲಾಗಿದೆ. (ಯೋಗೇಶ್ ದಯಾಳ್) ಪತ್ರಿಕಾ ಪ್ರಕಟಣೆ: 2022-2023/S84 |